ಫ್ರಿಗೇಟ್ - 
ಪೆಲೆಕಾನಿಫಾರ್ಮೀಸ್ ಗಣದ ಫ್ರಿಗೇಟಿಡೀ ಕುಟುಂಬಕ್ಕೆ ಸೇರಿದ ಫ್ರಿಗೇಟ ಜಾತಿಯ ಹಕ್ಕಿ. ಇದರಲ್ಲಿ ಮ್ಯಾಗ್ನಿಫಿಸೆನ್ಸ್, ಆಕ್ವಿಲ, ಆಂಡ್ರ್ಯೂಸೈ, ಏರಿಯಲ್ ಮತ್ತು ಮೈನರ್ ಎಂಬ ಐದು ಪ್ರಭೇದಗಳುಂಟು.  ಇವು ಉಷ್ಣ ಹಾಗೂ ಉಪೋಷ್ಣವಲಯ ಸಾಗರಗಳ ದ್ವೀಪಗಳಲ್ಲಿ ವಾಸಿಸುವುವು.  (ಉದಾಹರಣೆಗೆ ದಕ್ಷಿಣ ಟ್ರಿನಿಡ್ಯಾಡ್, ಗಲಾಪಗಸ್, ಹವಾಯ್, ಆಲ್ಡಬ್ರ ಮುಂತಾದ ದ್ವೀಪಗಳು). ಇವು ಮಧ್ಯಮ ಗಾತ್ರದ ಹಕ್ಕಿಗಳು. ಇವುಗಳ ಸರಾಸರಿ ಉದ್ದ 75-110 ಸೆಂಮೀ, ರೆಕ್ಕೆಯ ಹರವು 175-230 ಸೆಂಮೀ. ತೂಕ ಸುಮಾರು 1.5 ಕೆಜಿ. ಕೊಕ್ಕು ಉದ್ದವಾಗುದ್ದು ತುದಿಯಲ್ಲಿ ಕೊಕ್ಕೆಯಂತೆ ಬಾಗಿದೆ. ರೆಕ್ಕೆಗಳು ಕಿರಿಯಗಲದವು. ತೋಕೆ ಕವಲೊಡೆದಿದ್ದು ಹಾರುವಾಗ ವಿಸ್ತøತಗೊಳ್ಳುತ್ತದೆ. ಗಂಡುಗಳಿಗಿಂತ ಹೆಣ್ಣು ಹಕ್ಕಿಗಳು ದೊಡ್ಡಗಾತ್ರದವು. ದೇಹದ ಬಣ್ಣ ಕಪ್ಪು. ಪ್ರಣಯಾಚರಣೆಯ ಕಾಲದಲ್ಲಿ ಗಂಡುಗಳ ಕತ್ತುಗಳ ಬಳಿ ಕೆಂಪುಬಣ್ಣದ ಹಾಗೂ ಗಾಳಿತುಂಬಿದ ಬಲೂನಿನಂತೆ ಉಬ್ಬಿಕೊಂಡಿರುವ ಚೀಲವೊಂದು ರೂಪುಗೊಳ್ಳುತ್ತದೆ. ಹೆಣ್ಣು ಹಕ್ಕಿಗಳನ್ನು ಆಕರ್ಷಿಸುವ ಮುಖ್ಯ ಸಾಧನ ಇದು. 
ಫ್ರಿಗೇಟ್ ಹಕ್ಕಿಗಳು ಸಾಗರ ಜೀವನಕ್ಕೆ ಸೊಗಸಾಗಿ ಹೊಂದಿಕೊಂಡಿವೆ. ಸಾಧಾರಣವಾಗಿ ನೀರಿಗೆ ಇಳಿಯಲು ಹಿಂದೇಟು ಹಾಕುವುದಾದರೂ ಸಮುದ್ರದ ಮೇಲೆ ಅತ್ಯಂತ ಸರಾಗವಾಗಿ ಹಾರುತ್ತ ನೀರಿನಿಂದ ಮೇಲಕ್ಕೆ ನೆಗೆಯುವ ಹಾರುವ ಮೀನು ಇತ್ಯಾದಿ ಪ್ರಾಣಿಗಳನ್ನು ಹಿಡಿಯುತ್ತ ಜೀವನ ನಡೆಸುವುವು. ಅಂತೆಯೇ ಚಾಣಾಕ್ಷತನದಿಂದ ನೀರಿಗೆ ಸೋಕದಂತೆ, ನೀರಿನ ಪಾತಳಿಯ ಮೇಲೆಯೇ ಈಜುವ ಅಂಬಲಿ ಮೀನು, ಸ್ಕ್ವಿಡ್ಡುಗಳು, ನೀರಾಮೆ ಮತ್ತಿತರ ಜೀವಿಗಳನ್ನು ಹಿಡಿಯುವ ಸಾಮಥ್ರ್ಯವೂ ಇವಕ್ಕಿದೆ. ಜೊತೆಗೆ ಬೇರೆ ಕಡಲ ಹಕ್ಕಿಗಳಾದ ಬೂಬಿ, ಪೆಲಿಕನ್, ಕಾರ್ಮಾರಾಂಟ್ ಗಲ್ ಮುಂತಾದವುಗಳ ಗೂಡುಗಳನ್ನು ಕೊಳ್ಳೆ ಹೊಡೆಯುವುದೂ ಉಂಟು.

ಸಾಗರದ ದ್ವೀಪಗಳ ಮೇಲೆ, ಮರಗಿಡಗಳ ಮೇಲೊ, ನೆಲದ ಮೇಲೊ ಕಡ್ಡಿಗಳ ಒರಟು ಗೂಡನ್ನು ರಚಿಸಿ ಮೊಟ್ಟೆಯಿಡುವುವು. ಒಂದು ಸಲಕ್ಕೆ ಒಂದೇ ಮೊಟ್ಟೆ. ಗಂಡು ಹೆಣ್ಣುಗಳೆರಡೂ ಸುಮಾರು 6 ವಾರಗಳ ಕಾಲ ಕಾವು ಕೂತುಮರಿಮಾಡುತ್ತವೆ. ಮರಿಯ ತಲೆ ಮೊದಲು ಬಿಳಿಯ ಬಣ್ಣದ್ದಾಗಿದ್ದು ಬರ ಬರುತ್ತ 2-3ವರ್ಷಗಳ ತರುವಾಯ ಕಪ್ಪು ಬಣ್ಣವನ್ನು ತಳೆಯುತ್ತದೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ